ಶನಿವಾರ, ಜನವರಿ 12, 2013

ಕನ್ನಡಿಗರಿಗೊಂದು ಕಯ್‍ಪಿಡಿ


ಪುಟಗಳು:    ೧೪೩
ಇಸವಿ:        ೨೦೧೨
ಹೊರತರಿಕೆ: ಬಾಶಾ ಪ್ರಕಾಶನ, ಸಾಗರ ೫೭೭೪೧೭
ಹಂಚಿಕೆ:      ನವಕರ‍್ನಾಟಕ ಪ್ರಕಾಶನ, ಬೆಂಗಳೂರು ೫೬೦೦೦೧

ಕನ್ನಡಿಗರೂ ದ್ರಾವಿಡರೆ. ಹೀಗೆ ಒಂದು ಸಲ ಹೇಳಿ ಸುಮ್ಮನೆ ಕುಳಿತರೆ ಆಗುವುದಿಲ್ಲ. ಕನ್ನಡಿಗರು ಹೇಗೆ ದ್ರಾವಿಡರು ಎಂಬುದಕ್ಕೆ ನಂಬುವಂತಹ ವಯ್‍ಜ್ನಾನಿಕ ಇಂಬುಗಳನ್ನು ಕೊಡಬೇಕು. ’ದ್ರಾವಿಡ’ ಎಂಬ ನುಡಿಯ ಸರಿಯಾದ ಹುರುಳನ್ನು ಗುರುತಿಸಿ ತೋರಿಸಬೇಕು. ಕನ್ನಡಿಗರ ಮಟ್ಟಿಗೆ ’ದ್ರಾವಿಡ’ ಎಂದರೇನು ಎಂಬುದನ್ನು ಬಿಡಿಸಿ ಹೇಳಬೇಕು. ಕನ್ನಡಿಗರ ದ್ರಾವಿಡತನದ ಚರಿತ್ರೆಯನ್ನು ವಿವರಿಸಬೇಕು. ಬಹುಮಟ್ಟಿನ ಕನ್ನಡಿಗರಿಗೆ ಅವರ ದ್ರಾವಿಡತನದ ಅರಿವು ಇಲ್ಲದಿರುವುದಕ್ಕೆ ಕಾರಣಗಳನ್ನು ಹೊರಗೆಡವಬೇಕು. ಕನ್ನಡಿಗರ ನಡೆನುಡಿಗಳ ದ್ರಾವಿಡತನದ ಮೇಲೆ ಇದುವರೆಗೆ ನಡೆದಿರುವ ಮತ್ತು ಈಗಲೂ ನಡೆಯುತ್ತಿರುವ ಹೊರಗಣ ನಡೆನುಡಿಗಳ ಆಕ್ರಮಣದ ಬಗ್ಗೆ ಗಮನವನ್ನು ಸೆಳೆಯಬೇಕು. ಕನ್ನಡಿಗರ ದ್ರಾವಿಡತನವನ್ನು ಮರೆಮಾಚುವ ಕೆಲವರ ಪೊಳ್ಳು ಪ್ರಚಾರದ ಬಗ್ಗೆ ಕನ್ನಡಿಗರನ್ನು ಎಚ್ಚರಿಸಬೇಕು. ಮುಂದೆ ಬರಲಿರುವ ಕುತ್ತುಗಳ ಬಗ್ಗೆ ಕನ್ನಡಿಗರಿಗೆ ಮುಂಗಾಣ್ಕೆಯನ್ನು ಕೊಡಬೇಕು. ಕುತ್ತುಗಳನ್ನು ತಡೆಯುವುದಕ್ಕೂ ತೊಡೆಯುವುದಕ್ಕೂ ದಾರಿ ಏನು ಎಂಬುದನ್ನು ಅರುಹಬೇಕು. ಎಲ್ಲಕ್ಕೂ ಮಿಗಿಲಾಗಿ ಇಶ್ಟೆಲ್ಲಾ ವಿಶಯವನ್ನು ವಯ್ಯಕ್ತಿಕ ಅಬಿಪ್ರಾಯಗಳನ್ನು ತೂರಿಸದೆ ಓದುಗರ ಮುಂದಿಡಬೇಕು!
      ಮೇಲಿನ ಎಲ್ಲ ಉದ್ದೇಶಗಳನ್ನು ತಲೆಯಲ್ಲಿಟ್ಟುಕೊಂಡು ಬರೆದ ಓದುಗೆ ’ಕನ್ನಡಿಗರೂ ದ್ರಾವಿಡರೆ’. ಕನ್ನಡಿಗರ ದ್ರಾವಿಡತನದ ಬಗ್ಗೆ ಪ್ರಚಾರ ಮಾಡುವುದಕ್ಕೆ ನಮ್ಮ ಗೆಳೆಯರಿಗೆ ಬೇಕಾಗುವ ಎಲ್ಲಾ ತಿಳಿವೂ ಈ ಪುಸ್ತಕದಲ್ಲಿ ಅಡಕವಾಗಿದೆ. ವಿಶಯಗಳನ್ನು ಎಲ್ಲರಿಗೂ ಸುಲಬವಾಗಿ ಅರ‍್ತವಾಗುವಂತೆ ಸರಳ ಕನ್ನಡದಲ್ಲಿ ಬರೆಯಲಾಗಿದೆ. ಓದುಗರು ಆಕಳಿಸಿ ಪುಸ್ತಕವನ್ನು ಎಸೆಯದಿರಲಿ ಎಂದು ನಿರೂಪಣೆಯನ್ನು ಚುರುಕಾಗಿ ಓಡುವಂತೆ ಮಾಡಲಾಗಿದೆ. ಒಮ್ಮೆ ಈ ಪುಸ್ತಕವನ್ನು ಓದಿದರೆ, ಕನ್ನಡಿಗರ ದ್ರಾವಿಡತನವನ್ನು ಅಲ್ಲಗಳೆಯುವವರ ಬಾಯಿ ಮುಚ್ಚಿಸಲು ಬೇಕಾಗುವ ಎಲ್ಲಾ ಮಾಹಿತಿ ನಿಮಗೆ ದೊರೆಯುತ್ತದೆ. ಉಳಿದಂತೆ, ಸಾಮಾನ್ಯ ಕನ್ನಡಿಗರಿಗೂ ಈ ಓದುಗೆಯಿಂದ ನಿಜವಾದ ಕನ್ನಡತನದ ಪರಿಚಯ ಉಂಟಾಗುತ್ತದೆ. ಹಾಗಾಗಿ, ಕನ್ನಡದ ಎಲ್ಲ ಒಲವಿಗಳು ಮತ್ತು ಹೋರಾಟಗಾರರು ಈ ಪುಸ್ತಕವನ್ನು ಒಮ್ಮೆ ಓದಬೇಕು ಎಂಬುದು ನನ್ನ ಆಸೆ.

ಈ ಓದುಗೆಯನ್ನು ಹೇಗೆ ಪಡೆದುಕೊಳ್ಳಬಹುದು?

ಮೊದಲನೆಯದಾಗಿ, ಎಂದಿನಂತೆ ಬೆಲೆ ತೆತ್ತು ಕೊಂಡುಕೊಳ್ಳಬಹುದು. ಸದ್ಯಕ್ಕೆ ಈ ಪುಸ್ತಕ ನವಕರ‍್ನಾಟಕ ಪ್ರಕಾಶನದವರ ಹಾಗೂ ಸಪ್ನ ಬುಕ್ ಹವ್‍ಸ್ ಅವರ ಅಂಗಡಿಗಳಲ್ಲಿ ದೊರೆಯುತ್ತಿದೆ. ಹೆಚ್ಚುವರಿಯಾಗಿ, ಮಯ್ಸೂರಿನಲ್ಲಿ ಡಿ.ವಿ.ಕೆ. ಮೂರ‍್ತಿ ಮತ್ತು ಚೇತನ ಪುಸ್ತಕ ಅಂಗಡಿಗಳಲ್ಲೂ ದೊರೆಯುತ್ತಿದೆ.

ಎರಡನೆಯದಾಗಿ, ಈ ಪುಸ್ತಕವನ್ನು ಉಚಿತವಾಗಿ ಕೆಳಕಂಡ ಬಗೆಯಲ್ಲಿ ಪಡೆದುಕೊಳ್ಳಬಹುದು:

ಈ ಬ್ಲಾಗಿನಲ್ಲಿ ಪತ್ತಿಸಲು ಮುನ್ನೂರು ಪದಗಳಿಗೆ ಕಡಿಮೆ ಇರದ, ಆರುನೂರು ಪದಗಳನ್ನು ಮೀರದ, ಕನ್ನಡಿಗರ ದ್ರಾವಿಡತನದ ಕುರಿತಾಗಿ ತಕ್ಕದಾದ ಕನ್ನಡ ಬರಹವೊಂದನ್ನು kannadigarudravidare@gmail.com ಗೆ ಕಳಿಸಿಕೊಡುವುದರಿಂದ. (ಇದು ಎಲ್ಲರಿಗೂ ಕೊಟ್ಟಿರುವ ತೆರೆದ ಆಹ್ವಾನ. ಹೆಚ್ಚು ಹೆಚ್ಚು ಕನ್ನಡಿಗರು ದ್ರಾವಿಡತನದ ಅನಿಸಿಕೆಗಳ ಕೊಡು-ಕೊಳುವಿನಲ್ಲಿ ಪಾಲ್ಗೊಳ್ಳಲಿ ಎಂಬುದು ಇದರ ಉದ್ದೇಶ)
ಬರಹಗಳು ಹೇಗಿರಬೇಕೆಂದರೆ, ಅವು ಮಾದ್ಯಮಗಳಲ್ಲಿ ವರದಿಯಾದ ಯಾವುದಾದರೂ ಸಂಗತಿಯಿಂದ ಪ್ರೇರಿತವಾಗಿರಬಹುದು, ಇಲ್ಲ, ನಿಮ್ಮ ಅನುಬವಗಳಿಂದ ಅತವ ಚಿಂತನೆಯಿಂದ ಮೂಡಿದುವಾಗಿರಬಹುದು, ಇಲ್ಲ, ನಿಮ್ಮ ಓದಿನಿಂದ ಒದಗಿಬಂದವಾಗಿರಬಹುದು - ಒಟ್ಟಿನಲ್ಲಿ ಅವು ಕನ್ನಡಿಗರ ದ್ರಾವಿಡತನಕ್ಕೆ ಸಂಬಂದಿಸುವಂತೆಯೋ, ಹೊಂದಿಸುವಂತೆಯೋ ಇರಬೇಕು, ಅಶ್ಟೆ. ಉದಾಹರಣೆಗಳಿಗಾಗಿ, ಇದುವರೆಗೆ ಈ ತಾಣದಲ್ಲಿ ಪತ್ತಿಸಲಾಗಿರುವ ಬರಹಗಳನ್ನು ಒಮ್ಮೆ ಓದಿ ನೋಡಿ.

’ಕನ್ನಡಿಗರೂ ದ್ರಾವಿಡರೆ’ ಓದುಗೆಯನ್ನು ದಯವಿಟ್ಟು ಪಡೆದುಕೊಂಡು ಓದಿ ಎಂದು ಎಲ್ಲರಲ್ಲಿ ಮತ್ತೊಮ್ಮೆ ಕೇಳಿಕೊಳ್ಳುತ್ತೇನೆ. ಹಾಗೆಯೇ, ’ಕನ್ನಡಿಗರೂ ದ್ರಾವಿಡರೆ’ ಗೆಳೆಯರ ಬಳಗಕ್ಕೂ ಸೇರಿಕೊಳ್ಳಿ ಎಂದು ಕೇಳಿಕೊಳ್ಳುತ್ತೇನೆ. ಗೆಳೆಯರ ಬಳಗವನ್ನು ಸೇರುವುದೂ ಕೂಡ ಸಂಪೂರ‍್ಣ ಉಚಿತ (ಸೇರುವುದು ಹೇಗೆಂಬುದಕ್ಕೆ ಬಳಗ ಪುಟವನ್ನು ನೋಡಿ). ಬಳಗವನ್ನು ಸೇರುವುದರಿಂದ ಯಾವುದೇ ಬಗೆಯ ತೊಂದರೆಯಾಗಲೀ, ಕಿರಿಕಿರಿಯಾಗಲೀ ನಿಮಗೆ ಎಂದೂ ಉಂಟಾಗುವುದಿಲ್ಲ.
ಇನ್ನು ಪುಸ್ತಕದ ಬಗ್ಗೆ ನಿಮಗೇನಾದರೂ ಕೇಳ್ವಿಗಳಿದ್ದರೆ kannadigarudravidare@gmail.com ಗೆ ಸಂದೇಶ ಕಳಿಸಿ.

ನಲ್ಮೆಯೊಡನೆ,
ಎಚ್.ಎಸ್.ರಾಜ್

ಕಾಮೆಂಟ್‌ಗಳಿಲ್ಲ: