ಬಳಗ

ಅಕ್ಕರೆಯ ಕನ್ನಡಿಗರೆ,

ಕನ್ನಡಿಗರ ಮಾತಾದ ಕನ್ನಡ ಒಂದು ದ್ರಾವಿಡ ನುಡಿ. ಕನ್ನಡಿಗರ ಬುಡಕಟ್ಟು ದ್ರಾವಿಡ ಬುಡಕಟ್ಟು. ಆದರೆ ಇದು ಬಹಳಶ್ಟು ಕನ್ನಡಿಗರಿಗೆ ತಿಳಿದಿಲ್ಲ. ಇದನ್ನು ಅವರಿಗೆ ತಿಳಿಸಿಕೊಡುವುದೇ ’ಕನ್ನಡಿಗರೂ ದ್ರಾವಿಡರೆ’ ಗೆಳೆಯರ ಬಳಗದ ಗುರಿ. 'ಕನ್ನಡಿಗರಿಗೆ ಅವರ ಹಿನ್ನೆಲೆಯ ಬಗ್ಗೆ ಯಾಕೆ ತಿಳಿಸಿಕೊಡಬೇಕು?' ಎಂದು ನೀವು ಕೇಳಬಹುದು. ಅದಕ್ಕೆ ಉತ್ತರ, ತಿಳಿಸಿಕೊಡದಿದ್ದರೆ, ಕನ್ನಡ ಮತ್ತು ಕನ್ನಡತನವನ್ನು ಹೊರಗಿನ ನಡೆನುಡಿಗಳ ಆಕ್ರಮಣದಿಂದ ಕಾಪಾಡಲು ಆಗುವುದಿಲ್ಲ.
      ’ಕನ್ನಡಿಗರೂ ದ್ರಾವಿಡರೆ ಗೆಳೆಯರ ಬಳಗ’ ನಿಜಕ್ಕೂ ಒಂದು ಗೆಳೆಯರದೇ ಬಳಗ. ಅದರಲ್ಲಿ ಪದಾದಿಕಾರಿಗಳು ಇರುವುದಿಲ್ಲ. ಸದಸ್ಯರಲ್ಲಿ ಮೇಲು ಕೀಳು ಇರುವುದಿಲ್ಲ. ಎಲ್ಲ ಗೆಳೆಯರೂ ಸರಿಸಮಾನರೇ.
      ಬಳಗವನ್ನು ಸೇರಿಕೊಳ್ಳುವುದಕ್ಕಾಗಲೀ, ಬಳಗದಲ್ಲಿ ಉಳಿದುಕೊಂಡು ಬರುವುದಕ್ಕಾಗಲೀ ಯಾವುದೇ ಬಗೆಯ ಶುಲ್ಕವಿರುವುದಿಲ್ಲ. ಬಳಗದ ಗೆಳೆಯರು ಎಂದೂ ಯಾವ ಕಾರಣಕ್ಕೂ ಬಳಗಕ್ಕೆ ಹಣವನ್ನು ತೆರಬೇಕಾಗುವುದಿಲ್ಲ. ಅಶ್ಟೇ ಅಲ್ಲದೆ, ಯಾವುದೇ ಬಗೆಯ ತೊಂದರೆಗಾಗಲೀ, ಕಿರಿಕಿರಿಗಾಗಲೀ ಅವರನ್ನು ಎಂದೂ ಒಳಪಡಿಸಲಾಗುವುದಿಲ್ಲ.
      ಬಳಗದ ಗೆಳೆಯರು ಅವರವರ ಕಯ್ಲಾದಶ್ಟು ಕನ್ನಡಿಗರ ದ್ರಾವಿಡತನದ ಬಗ್ಗೆ ಪ್ರಚಾರವನ್ನು ಮಾಡಬೇಕು ಹಾಗೂ ಅವರವರ ಕಯ್ಲಾದಶ್ಟು ಕನ್ನಡಿಗರನ್ನು ಬಳಗಕ್ಕೆ ಸೇರುವಂತೆ ಮಾಡಬೇಕು - ಇಶ್ಟೆ ಅವರ ಹೊಣೆಗಾರಿಕೆ. ಒಂದೇ ಊರಿಗೆ ಅತವ ಪ್ರದೇಶಕ್ಕೆ ಸೇರಿದ ಗೆಳೆಯರು, ಇಶ್ಟಪಟ್ಟರೆ, ಅವರವರಲ್ಲೆ ಉಪಬಳಗಗಳನ್ನು ಮಾಡಿಕೊಳ್ಳಬಹುದು.
     ಬಳಗಕ್ಕೆ ಸೇರುವುದು ತುಂಬಾ ಸುಲಬ. ’ಕನ್ನಡಿಗರೂ ದ್ರಾವಿಡರೆ ಗೆಳೆಯರ ಬಳಗವನ್ನು ಸೇರಲು ಬಯಸುತ್ತೇನೆ. ಕನ್ನಡಿಗರಲ್ಲಿ ದ್ರಾವಿಡ ಅರಿವನ್ನು ಹರಡುತ್ತೇನೆ. ಬಳಗಕ್ಕೆ ಹೊಸಬರನ್ನು ಸೇರಿಸುತ್ತೇನೆ.’ - ಹೀಗೆಂದು ಬರೆದು, ನಿಮ್ಮ ಹೆಸರು, ಕೆಲಸ ಮತ್ತು ಮನೆಯ ಅತವ ಆಫೀಸಿನ ವಿಳಾಸದೊಂದಿಗೆ kannadigarudravidare@gmail.com ಗೆ ಈಮೇಲ್ ಸಂದೇಶವನ್ನು ಕಳಿಸಿದರೆ ನೀವು ಬಳಗವನ್ನು ಸೇರಿದಂತೆಯೆ! (ದಯವಿಟ್ಟು ಕಾಲ್ಪನಿಕ ಹೆಸರು ಮತ್ತು ವಿಳಾಸಗಳನ್ನು ಬಳಸಬೇಡಿ. ಹಾಗೆ ಮಾಡಿದರೆ, ಬಳಗದ ಉದ್ದೇಶವೇ ಮಣ್ಣುಪಾಲಾಗುತ್ತದೆ). ನಿಮ್ಮ ಈಮೇಲ್ ವಿಳಾಸವನ್ನು ನಿಮ್ಮ ಒಪ್ಪಿಗೆ ಇಲ್ಲದೆ ಪ್ರಕಟಗೊಳಿಸುವುದಿಲ್ಲ. ಬಳಗವನ್ನು ತೊರೆಯುವುದೂ ಅಶ್ಟೇ ಸುಲಬ. ಬಳಗವನ್ನು ಬಿಡುವ ನಿಮ್ಮ ಬಯಕೆಯನ್ನು ಮಿಂಚಿಸಿದರೆ ಸಾಕು, ಗೆಳೆಯರ ಪಟ್ಟಿಯಿಂದ ನಿಮ್ಮ ಹೆಸರನ್ನು ಅಳಿಸಲಾಗುತ್ತದೆ.
      ಬಳಗದ ಗೆಳೆಯರು, ಬಳಗದ ಸಲುವಾಗಿ ತಾವು ಕಯ್ಕೊಂಡ ಚಟುವಟಿಕೆಗಳ ಬಗ್ಗೆಯಾಗಲೀ, ದ್ರಾವಿಡತನದ ಬಗ್ಗೆ ತಮಗಿರುವ ಅನಿಸಿಕೆಗಳ ಬಗ್ಗೆಯಾಗಲೀ, ಉಳಿದ ಗೆಳೆಯರಿಗೆ ತಿಳಿಸಲಿಕ್ಕೆ ಸಹಜವಾಗೇ ಒಂದು ವೇದಿಕೆ ಬೇಕಾಗುತ್ತದೆ. ಸದ್ಯಕ್ಕೆ ಅಂತಹ ವೇದಿಕೆಯ ಅಗತ್ಯವನ್ನು ಈಗಿನ ಈ ನಮ್ಮ ಬ್ಲಾಗ್ ತಾಣ ಒದಗಿಸುತ್ತದೆ. ಬಳಗ ಬೆಳೆದಾಗ ನೆರೆಯಾದ ಒಂದು ಹೊಸ ಸ್ವತಂತ್ರ ವೆಬ್ ತಾಣವನ್ನು ತೆರೆಯೋಣ.
      ಇನ್ನು ಬಳಗದ ಬಗ್ಗೆ ನಿಮಗೇನಾದರೂ ಕೇಳ್ವಿಗಳಿದ್ದರೆ kannadigarudravidare@gmail.com ಗೆ ಸಂದೇಶ ಕಳಿಸಿ.
      ಇಶ್ಟೆ, ಕನ್ನಡಿಗರೂ ದ್ರಾವಿಡರೆ ಗೆಳೆಯರ ಬಳಗದ ಬಗ್ಗೆ ಹೇಳುವುದಕ್ಕಿರುವುದು. ನಿಮಗೆ ಬಳಗದ ಗುರಿ ಸರಿ ಎನಿಸಿದರೆ, ಕೂಡಲೇ ಬಳಗವನ್ನು ಸೇರಿಕೊಳ್ಳಿ. ಕನ್ನಡಿಗರ ನಿಜವಾದ ಕನ್ನಡತನವನ್ನು ಕಾಪಾಡುವುದರಲ್ಲಿ ನೆರವಾಗಿ.

ನಲ್ಮೆಯೊಡನೆ,
ಎಚ್.ಎಸ್.ರಾಜ್

ಕಾಮೆಂಟ್‌ಗಳಿಲ್ಲ: